ಕ್ರಲೆಜ, ಮಿರಸ್ಲಾವ್
1873-1941. ಯುಗೋಸ್ಲಾವಿಯದ ನಾಟಕಕಾರ, ಕಾದಂಬರಿಕಾರ, ವಿವಾದಾತ್ಮಕ ಸಾಹಿತ್ಯ ಕರ್ತೃ. ಈತನ ವಿಧ್ವಂಸಕ ವಿಡಂಬನ ಸಾಹಿತ್ಯ ಆ ಕಾಲದ ಸಮಾಜದ ಹುಳುಕುಗಳನ್ನು ಬಯಲಿಗೆಳೆದು ಸಮತಾವಾದಿಗಳ ಕ್ರಾಂತಿಗೆ ನೆರವಾಯಿತು. ಕ್ರಾಂತಿಯ ಅನಂತರ ಈತ ಪ್ರಮುಖ ಬರೆಹಗಾರನಾದ. 1919ರಲ್ಲಿ ಈತ ವಾಮಪಕ್ಷದ ಪ್ರಚಾರಕ್ಕಾಗಿ ಪ್ಲಾಮೆನ್ ಎಂಬ ಪತ್ರಿಕೆಯನ್ನು ಪ್ರಕಟಿಸಿದ. ಹರ್‍ವಾಟ್‍ಸ್ಕಿ ಬೊಗ್ ಮಾರ್ಸ್ (1922) ಎಂಬ ಈತನ ವಿಡಂಬನಾತ್ಮಕ ಕೃತಿ ಆಸ್ಟ್ರಿಯದ ಸಮರಸಿದ್ಧತೆ ಮತ್ತು ಸಾಮಾನ್ಯ ಜನರ ಬಾಳಿನ ಮೇಲೆ ಅದರ ಪ್ರಭಾವಗಳನ್ನು ಎತ್ತಿತೋರಿಸುತ್ತದೆ. ಗೊಲ್‍ಗೊತ (1932) ನಾಟಕ ಹಡಗು ನಿರ್ಮಾಣದ ಕೆಲಸದಲ್ಲಿ ತೊಡಗಿದವರ ಜೀವನದ ನಿರೂಪಣೆಯಾಗಿದೆ. ಗ್ಲೆಂಬಜೆರ್ ನಾಟಕ ಚಕ್ರದಲ್ಲಿ ತನ್ನ ನಾಡಿನ ಮಧ್ಯಮವರ್ಗದವರ ಕುಸಿತವನ್ನು ಕವಿ ಹೃದಯ ವಿದ್ರಾವಕವಾಗಿ ಚಿತ್ರಿಸಿದ್ದಾನೆ.               					(ಎಲ್.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ